ಎನ್ನ ಒಮ್ಮೆ ತಾಯಾಗಿಸು | Shailesh Shivakumar

THE FOLLOWING POEM BY SHAILESH SHIVAKUMAR FROM BANGALORE WON THE SECOND PRIZE IN WINGWORD POETRY COMPETITION 2023.

ತಾಯೇ,

ಮೇಲೆರಡು ಕೋಣನ ಕೋಡು

ಕೈಯಲ್ಲಿ ಹುಲಿಯುಗುರು ಮೂಡುತ್ತದೆ

ದೇವರಂತೆ ಬರಿಪಾದದಿ ನಡೆವವರ

ನಕ್ಷತ್ರ ಇಣುಕುವ ಬಟ್ಟೆ ತೊಟ್ಟವರ ಕಂಡಾಗ

ಕೀವು ಮನದಿಂದ ಹೃದಯಕ್ಕೆ ಜಾರಿ

ನಂಜು ಹತ್ತಿಸಿಕೊಂಡ ಕೈಕೇಯಿಯಂತೆ ಕಾರುತ್ತದೆ

ಪೇಪರಿನ ಮಸಿ, ಉಗುಳು, ವಾಟ್ಸಾಪಿನ ಸಂದೇಶ, ಸುಳ್ಳು ಸುದ್ದಿ ಇತ್ಯಾದಿ

ನಿನ್ನ ಓಂಕಾರ ಅಳಿಸಿರೋ

ನನ್ನ ನಾಲಗೆಯ ಬರೆಯ ಮಾಯಿಸಿ

ನಿನ್ನ ಪ್ರೀತಿ ಅಮೃತದಿ ಮನದ ನಂಜ ಒರೆಸಿ

ಜೀವ ಮಿಡಿತವ ಹಿಡಿಯಲು

ಎನ್ನ ಒಮ್ಮೆ ತಾಯಾಗಿಸು

ಶತ ಶತಮಾನಗಳ ಆಚರಣೆಯ ಯಜ್ಞ ಕುಂಡದ

ಭೇತಾಳವ ಬೆನ್ನ ಮೇಲೆ ಹೊತ್ತು

ಸುಡುಗಾಡು ಬೆಂಕಿ ಆರದಂತೆ

ದ್ವೇಷದ ಊದುಗೊಳವೆಯ ಊದುತ್ತಾ

ಹಳಸು ಮೋರಿನೀರ ಧಮನಿಯಲ್ಲಿ ಹರಿಸಿದ್ದೇನೆ

ಲಕ್ಷ್ಮಣ ರೇಖೆ ದಾಟುವವರ

ಧರ್ಮ ಗ್ರಂಥವ ಪಾಲಿಸದ

ಹರಕೆಯ ಕುರಿಗೆ ಮುಳ್ಳ ಕಿರೀಟ ತೊಡಿಸಿ

ಎಲ್ಲರೊಪ್ಪಿರುವ ಶಿಲುಬೆಗೇರಿಸಲು

ನನ್ನ ಕಾಲ ಕುಷ್ಠ ಹಿಡಿದ ಕೈಯ್ಯ ಕತ್ತರಿಸಿ

ನಡು ಮುರಿವ ಬೆನ್ನ ಭಾರ ಇಳಿಸಿ

ಎನ್ನ ಒಮ್ಮೆ ತಾಯಾಗಿಸು

ತುಳಿಯುವುದಕ್ಕೇ ಹುಟ್ಟಿರುವ ವಾಮನ ಕಾಲು

ಎರಡೆರಡು ಮಾಸ್ಕಲ್ಲೂ ಜಾತಿ ವಿಷವ ಮೂಸುವ ಅಸ್ಪೃಶ್ಯ ಮೂಗು

ಸಹಜೀವಗಳ ಶಿಕಾರಿಗೆ ಹೊಂಚುವ ಶಕುನಿ ಮನಸ್ಸು

ಪ್ರತಿಯೊಬ್ಬರ ಸಮವಸ್ತ್ರ ಹೊಲೆದಿರುವ ಹಿಟ್ಲರಿನ ಹೃದಯ

ಇಂತಿಪ್ಪ ಇಂದ್ರಿಯಗಳೆಲ್ಲಾ ಇಂಚುಪಟ್ಟಿ ಹಿಡಿದು ನಿಂತಿರುವಾಗ

ಕಂಡದ್ದೆಲ್ಲವ ಹೀರುವ ಈ ಕತ್ತಲ ಕಂಗಳ ಕಿತ್ತು

ಫುಟ್ಟುಪಾತಿನಲ್ಲಿ ಮಲ್ಲಿಗೆ ಪೋಣಿಸಲು ಸೂಜಿಬೆಳಕ ಕಂಗಳ ನೀಡು

ಒಂಟಿ ಸಲಗದ ದಂತ ತೋರುವ ಸ್ವಂತಿಗಳ ಅಳಿಸಿ

ಗ್ರೂಪ್ ಫೋಟೋದ ಸಹ ಪಂಕ್ತಿಯಲ್ಲಿರುವಂತೆ

ತಳ್ಳು ಗಾಡಿಗೊಂದು ಕೈ ಬೊಗಸೆಗೆ ಹಿಡಿ ಅನ್ನ

ನೀಡುವಂತೆ ಹರಸು

ಯಾವಾಗಲೂ ಏನನ್ನೂ ಮರೆತಿರುವ ಮನಕೆ

ಮರೆಯದೆ ಚಕ್ರವರ್ತಿಯ ಕೊನೆಯಾಸೆಯ ನೆನಪಿಸು

ಕಿಚ್ಚ ಕುದಿಎಣ್ಣೆ ಈಜುಕೊಳದಲಿ

ಮುಳುಗಿದರೂ ಬೇಯುವುದು

ತೇಲಿದರೂ ಸೀಯುವುದು

ತೋರುಬೆರಳುಗಳ ಸುಳಿಗೆ ಸಿಲುಕಿ

ನೆತ್ತಿಗೇರಿರುವ ನನ್ನ ನೆತ್ತರು

ಪ್ರಾಣದುಸಿರ ಪ್ರತಿ ಜೀವಕ್ಕೆ ಹಂಚಿ ಪೂರ್ಣವಾಗುವ ಅಮ್ಮಿ

ಎಲ್ಲೇ ಹೋದರೂ ಜೊತೆಗಿರುವ ಭೂಮಿ

ಎಲ್ಲ ಜೀವಕ್ಕೆ ಎದೆಗುಟುಕ ಜಿನುಗಿಸೋ ಗಂಗೆ

ನಾ ಕಾಣದ ಎಷ್ಟೆಲ್ಲ ಸುಂದರ ಮುಖಗಳು ತಾಯೆ ನಿನಗೆ?

ನೀನು ಅಪ್ಪಿದಾಗ

ನನ್ನ ಕಂಗಳು ಮುಚ್ಚಿದ್ದವು

ರಕ್ತ-ಮಾಂಸದ್ದಾಗಲಿ ಕಟ್ಟಿಗೆಯದ್ದಾಗಲಿ ಮಣ್ಣಿನದ್ದಾಗಲಿ

ಬೆನ್ನು ಯಾವುದಾದರೇನಂತೆ

ಮೇಣದಂತೆ ಕರಗಿದ್ದು ನಾನಲ್ಲವೇ?

ನದಿಯಂತೆ ಹರಿದದ್ದು ಜೀವವಲ್ಲವೇ?

ಕಲ್ಲಲ್ಲೂ ಕಣ್ಣೀರ ಕಾಣೋ

ಬೇಡರ ಕಣ್ಣಪ್ಪನ ದೃಷ್ಟಿ ದಯಪಾಲಿಸು

ಪಾಷಾಣದ ನನ್ನ ಎದೆಯ ಒತ್ತಿ

ಕರುಣೆಯುಸಿರ ಬಿತ್ತಿ

ನಿಜ ಮನುಷ್ಯನನ್ನಾಗಿ ಮರುಹುಟ್ಟಿಸು

ಗಿಣಿ ಕಚ್ಚಿರೋ ಹಣ್ಣಲ್ಲಿ

ಶಬರಿಯ ಪ್ರೇಮದೆಂಜಲನು ರುಚಿಸು

ಕಣ್ಣ ಬೆಳಕ ಸ್ಪರ್ಶದಲಿ

ಎದೆ ಬಡಿತವ ದಾಟಿಸು

ನಿನ್ನೆಲ್ಲ ಮಕ್ಕಳಲ್ಲಿ ನನ್ನನ್ನೇ ಕಾಣಲು

ಎನ್ನ ಒಮ್ಮೆ ತಾಯಾಗಿಸು.

About the poet

Dr Shailesh Shivakumar is a technologist by profession and poet by passion. He is currently working as a software architect in Bengaluru. He loves reading literature and is pursuing his second PhD in Kannada.